ಬದಲಾದ ಕಾಲದಲ್ಲಿ ಬೇಕಾದ ಬದಲಾವಣೆಗಳು

 


ಪ್ರಪಂಚವನ್ನು ನನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂಬ ದುರುದ್ದೇಶದಿಂದ, ತಪಸ್ಸುಮಾಡಿ ವರ ಪಡೆದುಕೊಂಡು ಭಸ್ಮವಾದ ಅಸುರರ ಬಗ್ಗೆಯೂ ಓದಿದ್ದೇವೆ. ಸರ್ವಾಧಿಕಾರದ ಮನೋಭಾವದಿಂದ ರಾಷ್ಟ್ರವನ್ನು ನಿರ್ಮಾಣ ಮಾಡಲು ಹೋಗಿ ದುರಂತ ಕಥೆಯಾದ ನಿದರ್ಶನಗಳನ್ನು ಕಂಡಿದ್ದೇವೆ, ಆದರೆ "ವಸುದೈವ ಕುಟುಂಬಕಂ", ಪ್ರಪಂಚವೆಲ್ಲಾ ಒಂದು ಕುಟುಂಬವಿದ್ದಂತೆ ಎಂಬ ನಂಬಿಕೆಯ ಮೇಲೆ ಭಾರತವು ಶತ-ಶತಮಾನಗಳಿಂದ ತನ್ನ ಮೇಲೆ ನಡೆದ ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಶೋಷಣೆಗಳನ್ನು ಮತ್ತು ಪರಿಣಾಮಗಳನ್ನು ಎದುರಿಸುತ್ತಲೇ ಬಂದಿದೆ. ಪ್ರಪಂಚಕ್ಕೆ ತನ್ನ ಸಾಮರ್ಥ್ಯವನ್ನು  ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ.

ಈ ಆತ್ಮಸ್ಥೈರ್ಯಕ್ಕೆ ಕಾರಣವನ್ನು ಗಮನಿಸಿದಾಗ,ಸದಾಚಾರ, ಸತ್ಕಾರ್ಯ ಮತ್ತು ಸತ್ಸಂಗಗಳನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟ ವೇದ, ವೇದಾಂತ, ಉಪನಿಷತ್ತು, ಶಾಸ್ತ್ರ, ಪುರಾಣ ಮತ್ತು ಗೀತೋಪದೇಶಗಳು ಎಂಬುದನ್ನು ಪ್ರತಿಯೊಬ್ಬರು ಮರೆಯಬಾರದು.

ಪ್ರತಿಯೊಂದು ಕಾಲಘಟ್ಟದಲ್ಲಿಯೂ ದೇಶವು ತನ್ನ ಮೇಲಾದ ಅನ್ಯಾಯ, ಅತಿಕ್ರಮಣಗಳನ್ನು ಸಹಿಸಿಕೊಂಡು ಪುನರುಜ್ಜೀವನವನ್ನು ಪ್ರಾರಂಭಿಸಲು ದೇಶದಲ್ಲಿರುವ ಚಿಂತಕರು, ವಿದ್ವಾಂಸರು, ಸಂತರು, ಸ್ವಾಮೀಜಿಗಳು, ದೇಶದ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿ ದೇಶವನ್ನು ಪುನರ್ನಿರ್ಮಾಣ ಮಾಡುವ ಕಾರ್ಯಕ್ಕೆ ಮುನ್ನುಡಿ ಹಾಕಿ ಕೊಡುತ್ತಾರೆ.

 ಕಾಲಕ್ಕನುಗುಣವಾಗಿ ಮಾನಸಿಕವಾಗಿ ಧನಾತ್ಮಕ ಚಿಂತನೆಗಳ ಮತ್ತು ದೈಹಿಕವಾಗಿ ಯೋಗಾಭ್ಯಾಸಗಳ ಅವಶ್ಯಕತೆಯನ್ನು,ಕರೋನಾದಿಂದಾಗುತ್ತಿರುವ  ಸಾವುಗಳನ್ನು ಗಮನಿಸಿದರೆ ಅರಿವಿಗೆ ಬರುತ್ತದೆ. ಉಸಿರಾಟ, ಆರೋಗ್ಯ ಮತ್ತು ಚಿಂತನೆಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಕಷ್ಟವಾದ ವಿಷಯವೇನಲ್ಲ ಆದರೆ ಅದನ್ನು  ದಿನನಿತ್ಯ ಪರಿಪಾಲನೆ ಮಾಡುವುದು  ಕಠಿಣಕರವಾದ ಕೆಲಸ. ಅತ್ಯಂತ ಸೂಕ್ಷ್ಮ ವೈರಾಣು  ತಂತ್ರಜ್ಞಾನ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ ಎಂಬ ಭ್ರಮೆಯಲ್ಲಿದ್ದ ಮನುಷ್ಯರಿಗೆ ದೊಡ್ಡ ಸವಾಲಾಗಿ ನಿಲ್ಲಬಹುದು ಎಂಬ ಕಲ್ಪನೆ ಇರಲಿಲ್ಲ ಅನ್ನಿಸುತ್ತದೆ.

ಭಾರತೀಯ ಶಿಕ್ಷಣ ಪದ್ಧತಿಯು ಮಾನಸಿಕ ಮತ್ತು ದೈಹಿಕ ಸಮತೋಲನಕ್ಕಾಗಿ ಯೋಗಶಾಸ್ತ್ರ ಮತ್ತು ಅಧ್ಯಾತ್ಮವನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ. ಆದರೆ ಕಳೆದ 70 ವರ್ಷಗಳಿಂದ ಕೇವಲ ಉದ್ಯೋಗದ ಆಕಾಂಕ್ಷೆ ಗಾಗಿ ಪದವಿಯನ್ನು ಪಡೆದ ಮನುಷ್ಯನು ತನ್ನ ದೈನಂದಿನ ಚಟುವಟಿಕೆಗಳ ಆದ ಆಹಾರ, ನಿದ್ದೆ ಮತ್ತು ಕುಟುಂಬದ ಪದ್ಧತಿಗಳನ್ನು ಕಡೆಗಣಿಸಿರುವುದು ಒಪ್ಪಲೇಬೇಕಾದ ಸಂಗತಿ. ಪಾಕಶಾಸ್ತ್ರದಲ್ಲಿ ವೈಜ್ಞಾನಿಕವಾದ ಹಾಗೂ ಆರೋಗ್ಯಕ್ಕನುಗುಣವಾಗಿ ಆಹಾರ ಪದ್ಧತಿಗಳು ಇರುವುದಂತೂ ನಿಜ, ಅದೇ ರೀತಿ ಮಾನಸಿಕ ನೆಮ್ಮದಿ ಮತ್ತು ನಿದ್ರೆಗೆ ಉಪಯುಕ್ತವಾಗುವ ಯೋಗಶಾಸ್ತ್ರವನ್ನು  ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳದೆ ಚಿಕಿತ್ಸೆ ರೂಪದಲ್ಲಿ ಪಡೆಯುತ್ತಿರುವುದು ದುರದೃಷ್ಟದ ಸಂಗತಿ. ಹಿಂದೂ ಧರ್ಮದ ಆಚರಣೆಗಳ ಪ್ರಕಾರ ಕೌಟುಂಬಿಕ ವಾತಾವರಣಕ್ಕೆ ಮತ್ತು ಸಂಬಂಧಗಳಿಗೆ ಕೊಡುವ ಗೌರವವನ್ನು ಪುನಹ ಪರಿಪಾಲಿಸುವ ಅವಶ್ಯಕತೆ ಮತ್ತು ಅವಕಾಶಗಳು ಒದಗಿ ಬಂದಿದೆ.

ಕೋವಿಡ್ 19 ವಿಷಯಕ್ಕೆ ಬಂದರೆ ಅದರ ಮೂಲ ರಚನೆ, ಹರಡುವಿಕೆ ಮತ್ತು ಪರಿಣಾಮಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ, ಓದಿದ್ದೇವೆ. ಪ್ರಾಣ ಹಾನಿ, ಆರ್ಥಿಕ ಹಾನಿ, ಸಾಮಾಜಿಕ ಮತ್ತು ಕೌಟುಂಬಿಕ ಅಸಮತೋಲನವನ್ನು ಗಮನಿಸುತ್ತಿದ್ದೇವೆ. ಶ್ವಾಸಕೋಶಕ್ಕೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವುದರ ಮೂಲಕ ದೇಹಕ್ಕೆ ಆಮ್ಲಜನಕದ ಕೊರತೆಯನ್ನು  ಮಾಡಿ ಮನುಷ್ಯನನ್ನು ಸಾವಿನ ದವಡೆಗೆ ತಳ್ಳುತ್ತಿರುವುದು, ಲಾಕ್ ಡೌನ್ ನಿಂದಾಗಿ  ಕೂಲಿ ಕಾರ್ಮಿಕರು ಮತ್ತು ಮಧ್ಯಮವರ್ಗದವರು ಅನುಭವಿಸುತ್ತಿರುವ ಕಷ್ಟ, ಮಾನಸಿಕ ತೊಳಲಾಟವನ್ನು ಹೇಳತೀರದು. ಅವರೆಲ್ಲರೂ ದೇಶ ರಕ್ಷಣೆ ಮಾಡಲು ಹೋರಾಟ ಮಾಡುವ ಸೈನಿಕರಂತೆ ತಮ್ಮ ದಿನನಿತ್ಯ ಜೀವನದ ಅವಶ್ಯಕತೆಗಳಿಗೆ ಹೋರಾಟ ಮಾಡುತ್ತಿದ್ದಾರೆ ಎಂಬಂತೆ   ಭಾಸವಾಗುತ್ತಿದೆ. ಇದು ಒಂದು ಮುಖವಾದರೆ, ಅದರ ಇನ್ನೊಂದು ಮುಖದ ಪರಿಚಯವನ್ನು ನಾವು ಮಾಡಿಕೊಳ್ಳಲೇಬೇಕು.

ಕರೋನಾ ಹಾವಳಿಯಿಂದ ಆದ ಲಾಕ್ ಡೌನ್ ನಲ್ಲಿ ನಮ್ಮಜನರು ಕೌಟಂಬಿಕ ಮೌಲ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ, ಸದಸ್ಯರೆಲ್ಲರೂ ಒಟ್ಟಾಗಿ ಸಮಯ ಕಳೆಯುವುದು, ಆರೋಗ್ಯದ ದೃಷ್ಟಿಯಿಂದ ಯೋಗ, ಆಟ, ಪಾಠಗಳನ್ನು ಆರಂಭಿಸಿರುವುದು, ಅದೇ ರೀತಿಯಾಗಿ ಸಾವಯವ ಕೃಷಿ ಉತ್ಪನ್ನಗಳ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸಿರುವುದು,ಶಿಕ್ಷಣ ಕ್ಷೇತ್ರ ವನ್ನುಅಂತರ್ಜಾಲ ದೊಡನೆ ಸಂಯೋಜಿಸಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣವನ್ನು ತಲುಪಿಸಲು ಸಹಾಯಕರವಾದ  ಆಂಡ್ರಾಯ್ಡ್ ಯಾಪಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ಬಳಸಿ ಪಠ್ಯ ವಸ್ತುಗಳನ್ನು ಡಿಜಿಟಲೀಕರಣ ಮಾಡಿರುವುದು, ಭವಿಷ್ಯದ ಭದ್ರತೆಗೆ ಧನಾತ್ಮಕ ಸೂಚನೆ ಆಗಿರುವುದಂತೂ ನಿಜ.

ಇನ್ನು ಶುಭ್ರತೆಯ ವಿಷಯವನ್ನು ಮೊದಲಿನಿಂದಲೂ ಪಾಲಿಸುತ್ತಿರುವ ಭಾರತೀಯರು ಪರಿಸ್ಥಿತಿಗೆ ಸಾಕಾಗುವಷ್ಟು ಪಿ.ಪಿ.ಈ ಕಿಟ್, ಮಾಸ್ಕ್, ಸ್ಯಾನಿಟೈಸರ್ ಗಳನ್ನು ಉತ್ಪಾದಿಸುವಲ್ಲಿ ಸಾಧನೆ ಮಾಡಿದ್ದು ಗಮನಾರ್ಹ. ಕಷಾಯ  ಬಿಸಿನೀರು ಸೇವನೆ ಮಾಡುವುದರಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿ, ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿರುತ್ತದೆ. ಇನ್ನುಳಿದಂತೆ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸಿರುವುದು ಹಾಗೂ ದೇಶಾದ್ಯಂತ ರೈಲುಗಳ ಮೂಲಕ ಅದೇ ರೀತಿ ವಿದೇಶದಿಂದ ವಿಮಾನಗಳ ಮೂಲಕ ಸಾಗಿಸುತ್ತಿರುವುದು ಸಮಯೋಚಿತ ಯೋಜನೆಯಾಗಿರುತ್ತದೆ. ವೆಂಟಿಲೇಟರ್ ಗಳನ್ನು ಅವಶ್ಯಕತೆಗಳಿಗನುಗುಣವಾಗಿ ಕಡಿಮೆ ಖರ್ಚಿನಲ್ಲಿ ತಯಾರು ಮಾಡುವ ಗುರಿಯನ್ನು ತಲುಪಿದ್ದು ದೇಶದ ಸ್ವಾವಲಂಬಿ ಭಾವನೆ ಪ್ರತೀಕವಾಗಿರುತ್ತದೆ. ವೈದ್ಯಕೀಯ ಸಿಬ್ಬಂದಿಗಳು ಸೇವಾಮನೋಭಾವದಿಂದ ಜೀವವನ್ನು ಪಣಕ್ಕಿಟ್ಟು ನಿರ್ವಹಿಸಿದ ಕರ್ತವ್ಯ ಮಾನವೀಯತೆ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಎಲ್ಲಾ ಅಂಶಗಳ ಪ್ರತಿಫಲದಿಂದಾಗಿ ಇಂದು ಸಾವಿನ ಸಂಖ್ಯೆ ಒಂದು ಮಿಲಿಯನ್ ಗೆ ಪ್ರಪಂಚದ ಎಲ್ಲ ದೇಶಗಳನ್ನು ನೋಡಿದಾಗ ಕಡಿಮೆ ಇರುವುದು ಸಮಾಧಾನಕರ ಸಂಗತಿ.

ಇನ್ನು ಆಹಾರ ಮತ್ತು ಶಿಕ್ಷಣ ಕ್ಷೇತ್ರ ಗಳ ವಿಷಯಕ್ಕೆ ಬಂದಾಗ ಎರಡು  ವಿಭಿನ್ನ ರೀತಿಯ ವೈರಸ್ ಸೋಂಕಿನಿಂದ ದಶಕಗಳಿಂದ ನರಳುತ್ತಿರುವುದನ್ನು ನಾವು ಕಾಣುತ್ತೇವೆ.ಆದರೆ ಸಾಮಾನ್ಯ ಜನರು ಕಳೆದ ಮೂರು ನಾಲ್ಕು ವರ್ಷಗಳಿಂದ ಅದರಿಂದಾದ ಅಡ್ಡಪರಿಣಾಮಗಳನ್ನು ಗಮನಿಸಿ ಅದರ ಬಗ್ಗೆ ಚಿಂತನೆ ಮಾಡಲು ಪ್ರಾರಂಭಿಸಿದ್ದಾರೆ.  ಅಲ್ಲಲ್ಲಿ ಸಮಾನಮನಸ್ಕರು ಸೇರಿ ಅವುಗಳಿಗೆ ತಮ್ಮದೇ ರೀತಿಯಲ್ಲಿ ಪರಿಹಾರಗಳನ್ನು ಕಂಡುಹಿಡಿದು ಪಾಲನೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ (ಉದಾಹರಣೆಗೆ  ಗೃಹಶಾಲೆ, ಗುರುಕುಲ ಶಾಲಾ ಪದ್ಧತಿ ಮತ್ತು ಸವಾಯವ ಕೃಷಿ ಪದ್ಧತಿ).

ಆಹಾರ ಸರಬರಾಜು ಮಾಡಲು ಇರುವ ಮೂಲ ಕಾರ್ಖಾನೆ ಎಂದರೆ ಕೃಷಿ. ಪುಸ್ತಕದಲ್ಲಿ, ಭಾಷಣದಲ್ಲಿ ಭಾರತ ಕೃಷಿ ಪ್ರಧಾನ ಮತ್ತು ಹಳ್ಳಿಗಳ ದೇಶ ಎಂಬುದನ್ನು ಕೇಳುತ್ತೇವೆ.ಸ್ವಂತಿಕೆಯಿಂದ ಮಾಡುತ್ತಿದ್ದ ಕೃಷಿ ಪದ್ಧತಿಗಳ ಮೇಲೆ ಬಂಡವಾಳಶಾಹಿ ರಾಷ್ಟ್ರಗಳ ಕೆಟ್ಟದೃಷ್ಟಿಯಿಂದಾಗಿ, ಜನಸಂಖ್ಯೆ ಹೆಚ್ಚಾಗಿದೆ,ಪ್ರತಿಯೊಬ್ಬರಿಗೂ ಆಹಾರ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಕಾರಣದಿಂದ ಹಸಿರು ಕ್ರಾಂತಿ ಆಗಬೇಕೆಂದು ಹೇಳಿ, ಆಹಾರ ಉತ್ಪಾದನೆಯನ್ನು ಜಾಸ್ತಿ ಮಾಡಲು ರಾಸಾಯನಿಕ ಗೊಬ್ಬರ, ಹೈಬ್ರಿಡ್ ಬೀಜಗಳನ್ನು ಸರ್ವಶ್ರೇಷ್ಠವಾದ ಭಾರತೀಯ ಕೃಷಿಯನ್ನು ಕಡೆಗಣಿಸಿ ರೈತರ ಭೂಮಿಯನ್ನು ಬಳಕೆ ಮಾಡಿ ಕಂಪನಿಗಳ ಪ್ರಯೋಗಕ್ಕೆ ನೀಡಿದಂತಾಯಿತು. ಇದರಿಂದ ಉತ್ಪಾದನೆ ಏನೋ ಜಾಸ್ತಿಯಾಯಿತು ಆದರೆ ಗುಣಮಟ್ಟ ಕಳಪೆ ಆಗಿದ್ದನ್ನು ಯಾರು ನೋಡಲೇ ಇಲ್ಲ.ರಾಸಾಯನಿಕ ಕೃಷಿಯನ್ನು ಅಳವಡಿಸಿಕೊಂಡಲ್ಲಿ ಮುಂದಿನ ಹತ್ತು ವರ್ಷಗಳ ನಂತರ  ಮಣ್ಣಿನ ಫಲವತ್ತತೆಯ ಮೇಲೆ ಅಥವಾ ಆಹಾರದ ಗುಣಮಟ್ಟದ ಮೇಲೆ ಅಥವಾ ಅದನ್ನು ಸೇವಿಸುವ ಮನುಷ್ಯರ ಮೇಲೆ ಆಗುವ ಪರಿಣಾಮವೇನು? ಎಂಬುದನ್ನು ಊಹೆ ಮಾಡುವ ದಿಕ್ಕಿನಲ್ಲಿ ಯೋಚನೆಗಳು ಆಗಲಿಲ್ಲ.

ಹಸಿರು ಕ್ರಾಂತಿ ಮಾಡಿದರ ಪರಿಣಾಮವಾಗಿ ಇಂದು ನಾವು ವಿಷರಹಿತ ಆಹಾರ ಸೇವನೆ ಸಾಧ್ಯವೇ ಇಲ್ಲ ಎನ್ನುವಷ್ಟರಮಟ್ಟಿಗೆ ನಮ್ಮ ಆಹಾರ ಪದಾರ್ಥಗಳು ಹಾಳಾಗಿ ರುವುದನ್ನು ಕಾಣುತ್ತೇವೆ. ಇನ್ನು ಇದನ್ನು ಸೇವಿಸಿದ ಮನುಷ್ಯರ ಜೀವಿತಾವಧಿಯು ಸರಾಸರಿ 55 ವರ್ಷಕ್ಕೆ ಬಂದು ನಿಂತಿರುವುದನ್ನು ನಾವು ಗಮನಿಸುತ್ತಾ ಇದ್ದೆವೆ.ಇದಕ್ಕೆಲ್ಲ ಒಂದೇ  ಉತ್ತರ ಪ್ರತಿಯೊಬ್ಬರು ಸಾವಯವ ಕೃಷಿಯ ಮೂಲಕ ತಮ್ಮ ಅವಶ್ಯಕತೆಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಸುವುದರ ಬಗ್ಗೆ ಆಲೋಚನೆ ಮತ್ತು ಆಚರಣೆ ಮಾಡುವುದಾಗಿದೆ.

ಇನ್ನು ದೇಶದ ಭವಿಷ್ಯ ನಿಂತಿರುವುದೇ ಗುಣಮಟ್ಟದ ಶಿಕ್ಷಣದ ಆಧಾರದ ಮೇಲೆ, ಪ್ರಪಂಚದ ಬೇರೆ ಬೇರೆ ಕಡೆಯಿಂದ ನಮ್ಮ ದೇಶಕ್ಕೆ ಬಂದು ಹತ್ತು ಹದಿನೈದು ವರ್ಷಗಳವರೆಗೆ ಅಧ್ಯಯನಮಾಡಿ, ನಮ್ಮ ದೇಶದ ಶಿಕ್ಷಣ ಪದ್ಧತಿಯನ್ನು ಗೌರವಿಸಿ,  ಮಹಾನ್ ವ್ಯಕ್ತಿಗಳಾದ ಆರ್ಯಭಟ ಚಾಣಕ್ಯ ಪಾಣಿನಿ ಸುಶ್ರುತ ಚರಕ ಮುಂತಾದ ಜ್ಞಾನಿಗಳು ಈ ಪವಿತ್ರ ಭೂಮಿಯಲ್ಲಿ ಜ್ಞಾನ ಪಡೆದದ್ದು  ಉಂಟು, ನಂತರ ಬಂದ ಮೊಘಲರು ಪರಕೀಯರಂತವರು ನಮ್ಮ ಜ್ಞಾನ ಮತ್ತು ಸಂಸ್ಕೃತಿಯ ಸಂಪತ್ತನ್ನು ನೋಡಿ ಮೂಕವಿಸ್ಮಿತರಾಗಿ ಸರ್ವನಾಶ ಮಾಡಿದ್ದೂ ಉಂಟು.

ಮೆಕಾಲೆ ಶಿಕ್ಷಣ ನೀತಿಯ ಮೂಲಕ  ಭಾರತೀಯರ ಮೇಲೆ ಇಂಗ್ಲಿಷ್ ಭಾಷೆ ಯನ್ನು ಹೇರಿ, ಪಠ್ಯ ವಿಷಯಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಸಮಾಜ, ವಿಜ್ಞಾನ,ಭೂಗೋಳ, ಗಣಿತ ಇತ್ಯಾದಿ ಎಂಬಂತೆ ವಿಂಗಡಿಸಿದರು. ಹದಿನಾರು ವರ್ಷಗಳ ಕಾಲ ವಿದ್ಯಾರ್ಥಿಯ ಸಂಪೂರ್ಣ ವಯಸ್ಸನ್ನು ನಾಲ್ಕು ಗೋಡೆಯ ಮಧ್ಯೆ ಕಳೆದು ಹೋಗುವಂತೆ ಮಾಡಿ, ಪದವಿಯನಂತರ ಸ್ವಾವಲಂಬಿ ಆಗದೆ ಬೇರೆಯವರ ಅಧೀನದಲ್ಲಿ ಉದ್ಯೋಗ ಮಾಡುವ ಮನಸ್ಥಿತಿ ಬೆಳೆಸಿರುವುದನ್ನು ಮರೆಯಬಾರದು. ಸ್ವಾವಲಂಬಿ ಭಾವನೆಯನ್ನು ಬೇರು ಸಮೇತ ಕಿತ್ತುಹಾಕಿ ಸ್ವಾತಂತ್ರ್ಯ ನೀಡಿದ ನಂತರವೂ ನಮ್ಮನ್ನು ಶಿಕ್ಷಣ ನೀತಿಯ ಮೂಲಕ ಆಳಿದರು ಎಂಬ ಸತ್ಯ ತುಂಬಾ ತಡವಾಗಿ ನಮಗೆ ಅರ್ಥವಾಯಿತು ಎನ್ನಬಹುದು.ಗಿಡ-ಮರಗಳ ಕುರಿತಾದ ಪಾಠವನ್ನು ನೈಸರ್ಗಿಕ ಪರಿಸರದಲ್ಲಿ ಹೇಳಿಕೊಡದೆ ಪುಸ್ತಕದಲ್ಲಿನ ಗಿಡ-ಮರ ತೋರಿಸಿ ಪಾಠ ಮಾಡುವ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಇನ್ನು ಪೋಷಕರಾಗಲಿ ಶಿಕ್ಷಕರಾಗಲಿ ಕ್ರೀಡೆ  ಸಂಗೀತ, ನೃತ್ಯ, ಕಲೆ, ಯೋಗ ಮತ್ತು ಪಾರಂಪರಿಕ ವಿದ್ಯೆಗಳನ್ನು ಕಲಿಯುವುದು ನಿರುಪಯುಕ್ತ ಎಂಬ ಭಾವವನ್ನು ಯಾವಾಗ ಬಿಡುತ್ತಾರೋ?.

ದೇಶದ ಅದೆಷ್ಟೋ ಪೀಳಿಗೆಗಳನ್ನು ಸಂಪನ್ಮೂಲದಂತೆ ಬಳಸಿಕೊಂಡಿರುವುದು ಆಗಿದೆ ಆದರೆ ಮನುಷ್ಯರು ಕೇವಲ ಸಂಪನ್ಮೂಲವಲ್ಲ, ಆಸ್ತಿಯು ಹೌದು. ಅದನ್ನು ಕಾಪಾಡುವುದು ಮತ್ತು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು ಅತ್ಯವಶ್ಯಕ. 

ಈ ಎರಡು ವಿಷಯಗಳನ್ನು ಇಲ್ಲಿ ಉಲ್ಲೇಖಿಸಿದ ಕಾರಣವೇನೆಂದರೆ  ಶಿಕ್ಷಣ ಮತ್ತು ಆರೋಗ್ಯ ಜೀವನದ  ಮೂಲಭೂತ ಹಕ್ಕುಗಳು.ಇಂತಹ ವ್ಯವಸ್ಥೆಯನ್ನು ನಮ್ಮ ದೇಶದಿಂದಲೇ ಎರವಲುಪಡೆದು ಮೂಲ ಉದ್ದೇಶವನ್ನೇ  ರೂಪಾಂತರಗೊಳಿಸಿ ನಮಗೆ ನೀಡಿರುವುದು  ದೌರ್ಭಾಗ್ಯವೇ ಸರಿ.ಇದಕ್ಕೆಲ್ಲ ಒಂದೇ  ಉತ್ತರ ಪ್ರತಿಯೊಬ್ಬರು ಸಾವಯವ ಕೃಷಿಯ ಮೂಲಕ ಮತ್ತ್ತು ದೇಶೀ ಶಿಕ್ಷಣ ಪದ್ದತಿಯನ್ನು  ತಮ್ಮ ಅವಶ್ಯಕತೆಗೆ ಬೇಕಾದ ರೀತಿಯಲ್ಲಿ ಬಳಸುವುದರ ಬಗ್ಗೆ ಆಲೋಚನೆ ಮತ್ತು ಆಚರಣೆ ಮಾಡುವುದಾಗಿದೆ.

ಸ್ವಾವಲಂಬಿ ಯುವಕರು ಎಲ್ಲ ರೀತಿಯ ಅವಕಾಶಗಳನ್ನು ಬಳಸಿಕೊಂಡು ಸಾವಯವ ಕೃಷಿಯನ್ನು ಪಾಲಿಸಿ, ಪ್ರಚಾರ ಮಾಡುವ ದಿಕ್ಕಿನಲ್ಲಿ  ಮತ್ತು  ಶಿಕ್ಷಣವನ್ನು ಆದಷ್ಟು ವ್ಯಕ್ತಿತ್ವ  ವಿಕಸನ, ಸಮಾಜಮುಖಿ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಆಧಾರವಾಗಿಟ್ಟುಕೊಂಡು ದೇಶದ ಗೌರವ ಮತ್ತು ಅಭಿವೃದ್ಧಿಗೆ ಬೇಕಾದ ಚಿಂತನೆಗಳನ್ನು ಹುಟ್ಟುಹಾಕುವ ದಿಕ್ಕಿನಲ್ಲಿ ನೀಡಬೇಕಿದೆ.

ಓಡುತ್ತಿರುವ ಜೀವನಕ್ಕೆ ಅಲ್ಪವಿರಾಮ ನೀಡಿ, ಪ್ರತಿಯೊಬ್ಬರ ಆತ್ಮಾವಲೋಕನಕ್ಕೆ ಅವಕಾಶವನ್ನು ನೀಡಿದ ಲಾಕ್ ಡೌನ್ ಅನ್ನು ಸರಳ ವಿಚಾರ-ವಿಶಾಲ  ಚಿಂತನೆ ಮಾಡುವುದರ ಮೂಲಕ ಸರ್ವಕಾಲಕ್ಕೂ ಅನ್ವಯವಾಗುವ  ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.

ಧರ್ಮದ ಆಧಾರದ ಮೇಲೆ ರಾಷ್ಟ್ರ, ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಗತಿಶೀಲ ಗೊಳಿಸಿ ಅಭಿವೃದ್ಧಿಯ ಪಥದಲ್ಲಿ  ನಿಲ್ಲಿಸಿ, ಭವಿಷ್ಯದ ಪೀಳಿಗೆಯನ್ನು ಯಾವುದೇ ರೀತಿಯ ಪರಿಸ್ಥಿತಿ ಬಂದರು  ನಿರ್ಭೀತರಾಗಿ ಸಕಲ ಸಿದ್ಧತೆಗಳೊಂದಿಗೆ ಹೋರಾಟಕ್ಕೆ ಸನ್ನದ್ಧ ರನ್ನಾಗಿ ಮಾಡಬೇಕು.

ದೇಶವೆಂಬ ದೇಗುಲದೊಳಗೆ ಆತ್ಮ ನಿರ್ಭರತೆ ಎಂಬ ಹಣತೆಗೆ ಯುವಶಕ್ತಿ ಎಂಬ ತೈಲ ದಿಂದ ದೇಶಾಭಿಮಾನದ ಕಿಚ್ಚನ್ನು ಹಚ್ಚಿದಾಗ ಮಾತ್ರ  ಭಾರತ ಖಡಾಖಂಡಿತವಾಗಿ ಸದಾಕಾಲ ಬೆಳಗುತ್ತದೆ.

ಹೇಮಂತಕುಮಾರ್ ಅರ್ ಕಪ್ಪಾಳಿ,

hemanth.kappali@gmail.com 

Comments

  1. Analysis of current situation from the view of Santana Dharma..is the need of the hour and u have balanced it very well in ur article

    ReplyDelete
  2. Replies
    1. ಕನ್ನಡವನ್ನು ಸರಿಯಾಗಿ ಬಳಸಿದ್ದೀರಿ ನಾ ಲಾಯಕ್....

      Delete
  3. The rythem of your lines are amazing.it made me feel great.

    ReplyDelete

Post a Comment