Campus Life

 


ಕಾಲೇಜು ಜೀವನಕ್ಕೆ ಕಾಲಿಡುವ ಮಕ್ಕಳಿಗೊ೦ದು ಮುನ್ನುಡಿ


ಕಾಲೇಜು ಅಂದ ತಕ್ಷಣ ಒಂದು  ದೂಡ್ಡ ಕಟ್ಟಡ,ಒಳಗಡೆ ಬಂದಿರೋರಿಗೆ ಮಾರ್ಗದರ್ಶನ ನೀಡೋ ಕಛೇರಿ. ಪ್ರಾಂಶುಪಾಲರು, ಆಡಳಿತ ಮಂಡಳಿ, ಗ್ರಂಥಾಲಯ, ಹಾಸ್ಟೆಲ್ ಮತ್ತುಅದರ ವಾರ್ಡನ್ ಇವಷ್ಟೇ ಅಲ್ಲದೇ, ಹುಡುಗ ಹುಡಗಿಯರು ಜೂತೆಗೆ ಓದಬಹುದಾದ ಅವಕಾಶ,ಪಿಯುಸಿಗಿಂತ ಸ್ವಲ್ಪ ಜಾಸ್ತಿ ಸ್ವತಂತ್ರ ಸಿಕ್ಕ ಭಾವನೆಯನ್ನು ಎಲ್ಲ ಯುವಕ-ಯುವತಿಯರಲ್ಲಿ ಕಾಣಬಹುದು. ಇವೆಲ್ಲದರ ಮಧ್ಯ ನನ್ನ ಗಮನ ಸೆಳೆದದ್ದು ಕ್ಯಾಂಪಸ್ಸಿನ ಚಿತ್ರಣ,ಅದನ್ನೆ ಒಂದು ಪಾತ್ರವಾಗಿ ಮಾಡಿದಾಗ ಮೂಡಿ ಬರುವ ಭಾವನೆಗಳ ಚಿತ್ರಣ-ನಿಮ್ಮದೇ ಕ್ಯಾಂಪಸ್ಸಿನ ಒಂದು ಚಿತ್ರಣ.

ಭವಿಷ್ಯದ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಹೊತ್ತ ಹುಡುಗರು-ಹುಡುಗಿಯರು ನನ್ನ ಹತ್ತಿರ ಬರ್ತಾರೆ,  ನನ್ ಜೊತೆ ತಮ್ಮ ಪದವಿ ಮುಗಿಯೋವರೆಗೂ ಇರುತ್ತಾರೆ.ಇನ್ನು ನನ್ನ ಆಶ್ರಯದಲ್ಲಿ ಕಾಲೇಜಿಗೆ ಬಂದು, ಕ್ಲಾಸಿನ ಮುಖ ಕೂಡಾ ನೋಡದೇ ಇರೋರು,ಗ್ರಂಥಾಲಯಕ್ಕೆ ಹೋಗ್ದೆ ಇರೋರು, ನನ್ನಜೊತೆ ಇರುತ್ತಾರೆ.

ಇನ್ನು ನಾನು ನೋಡೋಕೆ ಹೇಗಿದೀನಿ ಅ೦ದರೆ,ಮರ,ಗಿಡ,ತೋಟದ ಒಳ್ಳೆಯ ಗಾಳಿ, ಸುತ್ತ ಹಸಿರು ಅಲ್ಲಲ್ಲಿ ನನ್ನ ಕುತ್ಕೋಳೋಕೆ  ಚಾಪೆ ತರಹ ಇರೋ ಹುಲ್ಲಿನ ಹಾಸು ಇದೆ, ಬೆಂಚು ಇವೆ ಗೊತ್ತಾ.ಅಯ್ಯೋ ಇನ್ನ ನನ್ನ ಜೊತೆ ಫುಟ್ಬಾಲ ಆಡೋಕೆ,ಕ್ರಿಕೆಟ ಆಡೋಕೆ,ಜಿಮ್‌ ಇದು ಕೊಡಾ ಇದೆ. ಯಾರು ಅಂತಾ ಗೊತ್ತಾಗಲಿಲ್ವಾ ನಿಮಗೆ? ಎಸ್, ಹೌದು, ಅದು ನಾನೇ ನಿಮ್ಮ ಕ್ಯಾ೦ಪಸ್ ಬೇರೆ-ಬೇರೆ ಕಾಲೇಜಿನಲ್ಲಿ ಬೇರೆ ಬೇರೆ ರೀತಿ ವಿಶೇಷವಾಗಿ ಅಲ೦ಕಾರಗೊ೦ಡಿರುವ ಸ್ಥಳ. ಅದನ್ನೇ ಒಂದು ಪಾತ್ರ ಅಂತಾ ಊಹಿಸಿ ನೋಡಿದಾಗ, ನಿಮ್ಮ ಜೊತೆ  ಹಂಚಿ ಕೊಳ್ಳೋ ವಿಷಯ ಸಿಕ್ಕಾ ಪಟ್ಟೆ ಇದೆ ಗೊತ್ತಾ, ಸರಿ ನೋಡೋಣ ಬನ್ನಿ.ಕಾಲೇಜುಗಳು ಊರ ಹೊರಗಡೆ ಇರುತ್ತವೆ,ಅವುಗಳಿಗೆ ಜೈಲಿನ ಗೇಟಿನ೦ತೆ ಇರೋ ದೊಡ್ಡ ಗೇಟ್ ಯಾಕೆ ಅನ್ನೋ ಪ್ರಶ್ನಗೆ ಉತ್ತರ ಹುಡುಕ್ತಾ ಇದೀನಿ, ಆದರೆ ಆ ಗೇಟ್ ನೋಡಿದ್ರೆ‌, ಎಷ್ಟು ಬೇಜಾರಾಗುತ್ತೆ ಗೊತ್ತಾ ಕಾಲೇಜೋ ಅಥವಾ ಜೈಲೋ ಅ೦ತಾ?

ಆದರೆ ನಮ್ಮ ಹುಡುಗರು ಗೊತ್ತಲ್ವಾ ಸತ್ತ ಹೆಣ ನೋಡಾಕೆ ಅ೦ತಾ ಹೋದ್ರೂ, ಅಲ್ಲಿ ನಡೆಯೋ ಎಮೋಷನಲ್ ಚಿತ್ರದ ಜೊತೆ ಕಾಮಿಡಿ ಚತ್ರ ಎನಾದ್ರು ಸಿಗುತ್ತಾ ಅಂತಾ ನೋಡೋರು.

ಒಂದು ನಿಜ ಹೇಳಲಾ! ನಿಮಗೆ ಕಾಲೇಜು ಜೀವನದಲ್ಲಿ ಬೇಜಾರು ಅಂತ ಆದಾಗ ಬಂದು ನನ್ನ ಹತ್ರ ಕೂತು ಒಮ್ಮೆ ಸುತ್ತ ಕಣ್ಣರಳಿಸಿ ನೋಡಿ, ಒಂದೊಂದು ಬೆಂಚ್ ಮೇಲೆ, ಒಂದೊಂದು ಗುಂಪಿನಲ್ಲಿ, ಒಂದೊಂದು ಕಾರ್ನರ್‌ಅಲ್ಲೂ ಒಂದೊಂದು ಸಿನಿಮಾ ಓಡ್ತಾ ಇರುತ್ತೆ, ನಿಮಗೆ ಹೇಗೆ ಬೇಕೋ ಹಾಗೆ ಊಹಿಸಿಕೊಳ್ಳುವ ಅವಕಾಶ ನಿಮಗೆ ಬಿಟ್ಟ ವಿಚಾರ ರೀ.

ಅಲ್ಲಿ ನೋಡಿ, ಆಟೋದಲ್ಲಿ ಹಿ೦ದೆ ಕೂತು ಬರೋ ಹುಡುಗರು, ಬಸ್ಸಿನಲ್ಲಿ ಪಾಸ್‌ ಮುಖಾ೦ತರ 2-3 ಗ೦ಟೆ ಕಾಲ ಪ್ರಯಾಣ ಮಾಡಿ ಬರೋರು ಇದಾರೆ,ಇಲ್ಲಿ ನೋಡಿ ಬೈಕಿನಲ್ಲಿ ಹಾಗು ಕಾರಿನಲ್ಲಿ ಎ.ಸಿ ಹಾಕಿಕೂ೦ಡು ಬರೋರು ಇದಾರೆ,ಅವರವರ ಸಾಮರ್ಥೈಕ್ಕೆ ತಕ್ಕ೦ತೆ.


ಅಗೋ ಅಲ್ಲಿ,ಹಾ..ಆ ಗುಂಪಿನ ಹುಡುಗರು ಅವರ ಸ್ನೇಹಿತ ಫೇಲ್ ಆಗಿರೋದಕ್ಕೆ ಸಮಾಧಾನ ಹೇಳಿ, ಆವರ ತಂದೆ ತಾಯಿಗೆ ಫೋನ್ ಮಾಡಿ ಫೇಲ್ ಆಗೋದು ಸಾಮಾನ್ಯವಾದ ವಿಷಯ,ಯಾಕಂದ್ರೇ ಕೆಲವೊಂದು ವಿಷಯಗಳನ್ನು ಕಲಿಯಬೇಕಾದ್ರೇ‌ ಫೇಲ್ ಆಗಬೇಕಾಗುತ್ತೆ ಅಂತಾ ಎಷ್ಟು ವಿವರವಾಗಿ ಹೇಳ್ತಾ ಇದಾರೇ ನೋಡಿ, ಪಾಪ ಅದೇಷ್ಟೋ ಮಧ್ಯಮ ವರ್ಗ,ಅದಕ್ಕಿಂತ ಕೆಳಗಿರುವ ಕುಟುಂಬದ ತಂದೆ ತಾಯಿಗೆ ಪಾಸು, ಫೇಲು ಮತ್ತು ಡಿಸ್ಟಿಂಕ್ಷನ್ ಅಷ್ಟೇ ಗೊತ್ತಿರುತ್ತೆ, ಸೆಮಿಸ್ಟರ್, ಸಿಲೆಬಸ್, ಬ್ಯಾಕ್ ಅನ್ನೋ ವಿಷಯ ಗೊತ್ತಿರೋಕೆ ಹೇಗೆ ಸಾಧ್ಯ ಹೇಳಿ? ಆದರೆ ಮಕ್ಕಳನ್ನ ವಿದ್ಯಾವ೦ತರನ್ನಾಗಿ ಮಾಡಬೇಕು ಅನ್ನೋ ಛಲ ಮಾತ್ರ ಆಛಲವಾಗಿರುತ್ತದೆ.

ಈ ಹುಡುಗಿ ಇಲ್ಲಿ ಬೆಂಚ್ ಮೇಲೆ ಹಾ,ಅವಳೇ  ಅಪ್ಪ-ಅಮ್ಮ ವರ್ಷಕ್ಕೊಮ್ಮೆ ಫೀಸ್ ಕೊಟ್ಟೋದೆ ಹೆಚ್ಚು ಇನ್ನು ಲ್ಯಾಪ್ ಟಾಪ್ ಅಂದ್ರೆ ಹೇಗೆ ಕೇಳೋದು, ಅಪ್ಪನಿಗೂ ಕಷ್ಟ ಅಲ್ವಾ ಅನ್ನೋ ಮುಖ ಭಾವ ನೋಡಿದರೇ, ಮನೆಯ ಕಷ್ಟದ ಬಗ್ಗೆ ಅವಳಿಗಿರೋ ಖಾಳಜಿನಾ ತೋರಿಸುತ್ತದೆ.

ಇನ್ನು ಅಗೋ ಹುಡುಗ ಪ್ರತಿ ತಿಂಗಳು ಖರ್ಚಿಗೆ ಬರೋ ಹಣ ಯಾಕೆ ತಡವಾಯಿತು? ಏನಾಗಿರಬಹುದು? ಅಂತ ಯೋಚನೆ ಮಾಡ್ತಾ ಇದಾನೆ.ಈ ತಿಂಗಳು ಯಾರ ಹತ್ತಿರ ಹಣ ಕೇಳಿ ಅಂತಾ ಯೋಚಿಸುತ್ತಿದ್ದಾನೆ.

ಇದರ ಜೊತೆ ಅದೇ ಅವರೆಲ್ಲ ಯಾಕೆ, ಅಷ್ಟು ಖುಷಿ ಇದಾರೆ ಅಂದ್ರೆ ಎಲ್ಲಾ ಪರಿಕ್ಷೇಲಿ ಒಳ್ಳೆ ಅಂಕ ತೆಗೆದು, ಕಾಲೇಜು ನೀಡಿದ್ದ ಟ್ರೈನಿಂಗ್ ತಗೊಂಡು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿರೋರು,ಅವರ ಭವಿಷ್ಯದ ಬಗೆಗಿನ ಕನಸುಗಳನ್ನು ಅವರ ಕಣ್ಣಲ್ಲಿ ಕಾಣುವುದೇ ಒಂದು ಸಂತೋಷ.

ಇನ್ನು ಪರೀಕ್ಷೆ,ಇಂಟರ್ವ್ಯೂವ್ ಇದ್ದಾಗ, ಹುಡುಗರ ಪಾಡು ನೋಡಿದರೇ, ಯಾವುದೋ ಯುಧ್ದಕ್ಕೆ ಹೋರಾಡುವ ಸೈನಿಕನ ರೀತಿ ಇರುತ್ತೇ ರೀ,ಫಾರ್ಮುಲಾಗಳಂತೆ, ಪ್ರೋಗ್ರಾಂಗಳಂತೆ, ಡೆರಿವೇಷನ್ ಅಂತೆ ಸರ್ಕ್ಯೂಟ್ ಚಿತ್ರಗಳಂತೆ, ಥಿಯರಿ ವಿಷಯಗಳಂತೆ ಇವೆಲ್ಲವನ್ನೂ ಅದು ಹೇಗೆ   ಮ್ಯಾನೇಜ ಮಾಡಿ,ಬರೆಯುತ್ತಾರೋ ಏನೋ ಗೊತ್ತಿಲ್ಲಾ?

ಇವೆಲ್ಲಾ ಸಾಮಾನ್ಯವಾಗಿ ಬಹುತೇಕ ವಿದ್ಯಾರ್ಥಿಗಳು ಮಾಡುವ ಚಟುವಟಿಕೆಗಳಾದರೆ,

ಇನ್ನುಕೆಲವು ಹುಡುಗರು ಸದಾ ತಮಗೆ ಇಷ್ಟವಾದ ಆಟ, ಹಾಡು ನೃತ್ಯ ಇತ್ತೀಚಿಗೆ ಫೋಟೋ ಮತ್ತು ವಿಡಿಯೋ ಮಾಡುವ ಗೀಳಂತು ತುಂಬಾನೇ ಆಗಿದೆ. ಕ್ಲಾಸ್ ಇದ್ದರೂ ಇಲ್ಲ ಅಂತ ಹೇಳಿ,ಮಾರ್ಕ್ಸ್ ಮತ್ತು ಹಾಜರಾತಿಗೆ ಬೆಲೆ ನೀಡದೆ, ತಂದೆ ತಾಯಿಗೆ ದಿಕ್ಕು ತಪ್ಪಿಸುವ ಕೆಲಸ ಕೂಡಾ ಮಾಡ್ತಾರೆ, ಸಿಕ್ಕಿ ಬಿದ್ದಾಗ ನಂಬಿಕೆ ಕಳಕೊಂಡು ಬಿಡ್ತಾರೆ.

ಪಾಪ ಅವರ ತಂದೆ ತಾಯಿ ಓದಿಗಾಗಿ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ಇವರ ಬಗ್ಗೆ ತಿಳಿದ ಕೂಡಲೇ, ಕಣ್ಣಲ್ಲಿ ನೀರು ಹಾಕಿ ಬಿಡುತ್ತಾರೆ, ಇನ್ನೂ ಕೆಲವರ ಆರೋಗ್ಯನೇ ಹಾಳಾಗಿ ಬಿಡುತ್ತೆ.

ಹುಡುಗಾಟಕ್ಕಾಗಿ ಮಾಡಿದ ಕೆಲಸದಿಂದ ಇಷ್ಟೆಲ್ಲಾ ಅವಾಂತರ ಆಗುತ್ತೆ ಗೊತ್ತಾ ಮಕ್ಕಳೇ?

ಇನ್ನೊಂದು ರೀತಿಯ ವಿದ್ಯಾರ್ಥಿಗಳು ಇರುತ್ತಾರೆ, ಅವರದೆಲ್ಲ ವಯಸ್ಸಿಗೂ ಮೀರಿದ ಚಟುವಟಿಕೆಗಳು ಹಾ! ಹಾ! ಅಲ್ಲ ಅದನ್ನು ತಪ್ಪು ಅಥವಾ ಅಪರಾಧ ಅಂತಾನೇ ಹೇಳಬೇಕು.

ಕೆಲಸಗಳಿಂದ ಕಾಲೇಜು ಮತ್ತು ಕುಟುಂಬಕ್ಕೂ ಕೆಟ್ಟ ಹೆಸರು,ಕ್ಯಾ೦ಪಸ್ಸನ್ನು ಮತ್ತು ಹಾಸ್ಟೆಲ್ಲನ್ನು ತಮ್ಮ  ದುರಭ್ಯಾಸಗಳಿಗೆ ಬಳಸಿಕೊಳ್ಳುವುದು, ಹೊತ್ತಿಲ್ಲದ ಹೊತ್ತಲ್ಲಿ ಕ್ಯಾಂಪಸ್ಸಿನಿಂದ ಹೊರಹೋಗುವುದು, ಯಾವುದೋ ಒಂದು ಮೂಲೆಯಲ್ಲಿ ಗಂಟೆ ಗಟ್ಟಲೇ ಕೂತುಬಿಡುವುದು, ಇಂಥಹುದನ್ನು ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದೇನೆ, ಯಾಕಂದರೆ ಅವರವರ ಕರ್ಮ ಅಂತಾ ಹೇಳಿ.

ತರಗತಿಗಳೆಂದರೆ ದೇವಾಲಯಗಳಿದ್ದಂತೆ, ಅವುಗಳನ್ನು ನಿಮ್ಮ ಭವಿಷ್ಯ ರೂಪಿಸುವುದಕ್ಕೆ ಬಳಸಿಕೋಳ್ಳಬೇಕು. ಕ್ಯಾಂಪಸ್ ಅಂದರೆ ಒಂದು ದೇವಾಲಯದ ಹೊರಾಂಗಣವಿದ್ದಂತೆ ಅನ್ನುವ ಭಾವವಿರಬೇಕು, ಅದು ಬಿಟ್ಟು ನಿಮ್ಮ ಮನಸ್ಸೋ ಇಚ್ಛೆ ಮಾಡುವ ಕೆಲಸಗಳಿಗೆ ಬೇಕಾದ ಜಾಗವಾಗಬಾರದು.

ನಾನು ಒಂದು ವಿಷಯ ಹೇಳ್ತೀನಿ ಕೇಳಿ,ಇತ್ತೀಚಿನ ದಿನಗಳಲ್ಲಿ ಯಾವ ಕಾಲೇಜಿನ  ಕ್ಯಾಂಪಸಾದ್ರೂ ಸರಿ ನಿಮ್ಮ ಕಾವಲಿಗಾಗಿ ಕ್ಯಾಮೆರಾಗಳಿದ್ದೇ ಇರುತ್ತೆ, ನಿಮ್ಮನ್ನು ಸೂಕ್ಷ್ಮವಾಗಿ ನೋಡುತ್ತಿರುವ ಒಬ್ಬ ಮೇಷ್ಟ್ರಾದರು ಇದ್ದೇ ಇರುತ್ತಾರೆ, ಅದೆಲ್ಲಾ ಬಿಡಿ ಕೊನೆಗೆ ನಿಮ್ಮ ತಂದೆ ತಾಯಿಯರ ಬಗ್ಗೆ ಸ್ವಲ್ಪವಾದರು ಭಯ, ಗೌರವ ಇದ್ದಲ್ಲಿ,ಅದ್ದನ್ನು ದಾಟಿ ಯಾವ ಕೆಲಸ ಆದ್ರೂ ಮಾಡಿದರೆ, ಅದು ನಿಮಗೆ ನೀವೇ ಮಾಡಿಕೊಳ್ಳುವ ಅವಮಾನ,ನಿಮ್ಮ ಆತ್ಮಾಭಿಮಾನದ ಆತ್ಮಹತ್ಯೆ ಇದ್ದಂತೆ,ನಿಮ್ಮ ಬೆಳವಣಿಗೆಗೆ ನೀವೇ ಕೂಡಲಿ ಪೆಟ್ಟು ಹಾಕಿಕೊಂಡಂತೆ.

ಕಾಲೇಜಿನ ಜೀವನ ಅನ್ನುವುದು, ಎಲ್ಲರ ಜೀವನದಲ್ಲಿ ಬರುವ ಒಂದು ಸುಂದರ ಪಯಣ, ಆದಷ್ಟು ಒಳ್ಳೆಯ ನೆನಪುಗಳನ್ನು ಹುಟ್ಟು ಹಾಕಿ ಯಾಕಂದರೆ ನೆನಪುಗಳು ಕೆಟ್ಟದಾಗಿ ಹೋದರೆ ಜೀವನ ಪೂರ್ತಿ ಒಂದು ಕಪ್ಪು ಚುಕ್ಕೆಯಂತೆ ಉಳಿದುಬಿಡುತ್ತದೆ.

ಸರಿ-ಸರಿ ಪದವಿ ಮುಗಿದು ಮತ್ತೇ ಇಲ್ಲಿಗೆ ಬಂದಾಗ, ನನ್ನ ಬಳಿ ಬಂದು ಕುಳಿತು ನಿಮ್ಮ ಸಿಹಿ ಮತ್ತು ಕಹಿ ನೆನಪುಗಳನ್ನು ಮೆಲುಕು ಹಾಕುವುದನ್ನು ಮರೆಯಬೇಡಿ.




ಇಂತಿ ನಿಮ್ಮ

                                                                                       ಕ್ಯಾ೦ಪಸ್

Comments